ಚಾಟರ್‍ಟನ್, ಥಾಮಸ್-
1752-1770. ಇಂಗ್ಲಿಷ್ ಕವಿ. ಬ್ರಿಸ್ಟಲ್‍ನಲ್ಲಿ ಹುಟ್ಟಿದ ಈತ ಉಪಾಧ್ಯಾಯನೊಬ್ಬನ ಮಗ. ಕೇವಲ ಹದಿನೆಂಟು ವರ್ಷದಲ್ಲೇ ಅಪೂರ್ವ ಪ್ರೌಢಿಮೆ ಸೂಚಿಸುವಂಥ ಕಾವ್ಯಕೃತಿಗಳನ್ನು ರಚಿಸಿ ಅಕಾಲಮರಣವನ್ನು ಅಪ್ಪಿದ. ಈತನ ಪೂರ್ವಜರು ಹಲವಾರು ತಲೆಮಾರುಗಳಿಂದ ಸೇಂಟ್ ಮೇರಿ ರ್ಯಾಡ್‍ಕ್ಲಿಫ್ ಚರ್ಚಿನಲ್ಲಿ ಪಾರುಪತ್ತೆಗಾರರಾಗಿದ್ದರು. ಕಲ್ಪನಾಶೀಲನೂ ನಿಶಿತಮತಿಯೂ ಆಗಿದ್ದ ಈ ಬಾಲಕ ಪುರಾತನ ಕಾಲದ ಆ ಅಗಾಧ ಚರ್ಚ್ ಕಟ್ಟಡದ ಸುತ್ತಮುತ್ತಲೂ ಹಾಗೂ ಅದರೊಳಗಿನ ಪತ್ರಾಗಾರದಲ್ಲಿದ್ದ ಓಬಿರಾಯನ ಕಾಲದ ದಸ್ತಾವೇಜುಗಳ ನಡುವೆಯೂ ಅಡ್ಡಾಡುತ್ತಿದ್ದು ಯಾವಾಗಲೂ ಪ್ರಾಚೀನ ಕಟ್ಟುಕಥೆ ಮತ್ತು ಇತಿಹಾಸ ರಮ್ಯವ್ಯಕ್ತಿಗಳನ್ನು ಕುರಿತು ಚಿಂತಿಸುತ್ತಿದ್ದ. ಜಾನ್ ಲ್ಯಾಂಬರ್ಟ್ ಎಂಬ ವಕೀಲನ ಬಳಿ ತರಬೇತಿ ಪಡೆಯುತ್ತಿದ್ದಾಗಲೂ ಈತನಿಗೆ ಅದೇ ಯೋಚನೆ. ವಿರಾಮ ಸಿಕ್ಕಾಗಲೆಲ್ಲ ಸಾಹಿತ್ಯ, ಇತಿಹಾಸ, ಪುರಾತತ್ತ್ವ ವಸ್ತುಗಳ ಗೀಳಿನಲ್ಲೇ ಇರುತ್ತಿದ್ದ. 1769ರಲ್ಲಿ ಈತ ಪ್ರಾಚೀನ ಶೈಲಿಯಲ್ಲಿ ಕೆಲವು ಕವನಗಳನ್ನು ಬರೆದು ಅವನ್ನು ಥಾಮಸ್ ರೌಲೆ ಎಂಬ ಹಳೆಯ ಕಾಲದ ಕವಿಯೊಬ್ಬ ಬರೆದುವೆಂದೂ ಅವನ್ನು ತಾನು ಹೊರತೆಗೆದಿರುವುದಾಗಿಯೂ ಕಥೆಕಟ್ಟಿದ. ಆ ಕವನಗಳ ಕಟ್ಟನ್ನು ಅಂದಿನ ಪ್ರಸಿದ್ದ ಗಾತಿಕ್ ಸಾಹಿತಿ ಹಾರಸ್ ವಾಲ್‍ಪೋಲ್‍ನ ಬಳಿ ಕೊಂಡೊಯ್ದಾಗ ಆತ ಮೊಟ್ಟಮೊದಲು ಅದನ್ನು ನಿಜವೆಂದೇ ತಿಳಿದು ಅವಕ್ಕೆ ಮಾರುಹೋದ. ಆದರೆ ಅನಂತರ ಕವಿ ಥಾಮಸ್ ಗ್ರೇ ಮತ್ತು ಮೇಸನ್‍ರ ಜತೆ ಸಮಾಲೋಚನೆ ನಡೆಸಿದ ಮೇಲೆ ರೌಲೆ ಎಂಬ ಹೆಸರು ಕಾಲ್ಪನಿಕವಿರಬೇಕು ಎನಿಸಿತು. ಇದನ್ನು ಒಪ್ಪಲಾರದ ಚಾಟರ್‍ಟನ್ ಮತ್ತೆ ಮತ್ತೆ ವಾಲ್‍ಪೋಲನ ಬಳಿ ಹೋಗಿ ತನಗೆ ಅವನ ಸಲಹೆ ನೆರವುಗಳು ಬೇಕೆಂದು ಅಂಗಲಾಚಿದ; ಕೊನೆಗೊಮ್ಮೆ ಕವನಗಳ ಕಟ್ಟನ್ನೂ ಬರೆದಿದ್ದ ವಿನಂತಿ ಪತ್ರಗಳನ್ನೂ ಹಿಂದಕ್ಕೆ ಪಡೆದ.

1770ರ ಏಪ್ರಿಲ್‍ನಲ್ಲಿ ಚಾಟರ್‍ಟನ್ ಬ್ರಿಸ್ಟಲ್‍ನಿಂದ ಲಂಡನ್ನಿಗೆ ತೆರಳಿದ. ರಿಕ್ತ ಹಸ್ತನಾದ್ದರಿಂದ ಅಲ್ಲಿ ತನ್ನ ಬರೆಹಗಳಿಂದಲೇ ಜೀವನ ನಡೆಸಲು ನಿರ್ಧರಿಸಿದ. ಕಡುತರ ಕಷ್ಟನಿಷ್ಠುರಗಳಿಗೆ ಸಿಕ್ಕಿ ತೊಳಲಿದ. ಅತೀವ ಮಾನಸಿಕ ವೇದನೆಯಿಂದ 1770ರ ಏಪ್ರಿಲ್ 24ರಂದು ಹಾಲ್‍ಬರ್ನಿನ ಬ್ರೂಕ್ ಸ್ಟ್ರೀಟ್‍ನಲ್ಲಿದ್ದ ತನ್ನ ಅಟ್ಟದ ಕೋಣೆಯಲ್ಲಿ ವಿಷ ಕುಡಿದು ಸತ್ತ. ಕೇವಲ ಚಿಕ್ಕಂದಿನಲ್ಲೇ ವಿಶೇಷ ಬುದ್ಧಿ ಶಕ್ತಿ, ಪ್ರತಿಭಾಸಂಪತ್ತುಗಳನ್ನು ಪಡೆದಿದ್ದ ಅಪಕ್ವ ವಯಸ್ಸಿನ ಈ ಬಾಲಕ ಉಗ್ರವಾದ ಅಹಂಭಾವನೆಯುಳ್ಳ ನಿರಾಶಾವಾದಿ ಆಗಿದ್ದುದರಲ್ಲಿ ಆಶ್ಚರ್ಯವೇನಿಲ್ಲ.

	ಚಾಟರ್‍ಟನ್ ಸತ್ತ ಕೂಡಲೇ ಸಾಹಿತಿಗಳ ಗೋಷ್ಠಿಯಲ್ಲಿ ದೊಡ್ಡದೊಂದು ಕೋಲಾಹಲವೇ ಉಂಟಾಯಿತು. ರೌಲೆ ಕವನಗಳನ್ನು ಸೃಷ್ಟಿಸಿದವ ಚಾಟರ್‍ಟನ್ನನೇ ಎಂದು ವಾದಿಸಿದವರದು ಒಂದು ಪಕ್ಷವಾಗಿ, ಅವು ಅಸಲೀ ಪುರಾತನ ಕೃತಿಗಳೇ ಎಂಬುವರದು ಪ್ರತಿಪಕ್ಷವಾಗಿ ದೊಡ್ಡ ಜಿಜ್ಞಾಸೆ ಎದ್ದಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಮರಣಾನಂತರ ಈ ಕವಿ ಅಸಾಧಾರಣ ರೀತಿಯಲ್ಲಿ ತನ್ನ ಸಮಕಾಲೀನ ಕವಿಗಳ ಅತಿ ಪ್ರಶಂಸೆಗೆ ಭಾಜನನಾದ. ಕೋಲ್‍ರಿಜ್ ಈತನ ನೆನಪಿಗಾಗಿ ಒಂದು ಶೋಕಗೀತೆ ರಚಿಸಿದ. ವಡ್ರ್ಸ್‍ವರ್ತ್ ತನ್ನ ಲೀಚ್ ಗ್ಯಾದರರ್ ಎಂಬ ಕವನದಲ್ಲಿ ಈತನನ್ನು ಅದ್ಭುತ ಬಾಲಕನೆಂದು ಕರೆದ. ಷೆಲ್ಲಿ ತನ್ನ ಲೋಕ ವಿಖ್ಯಾತ ಅಡೋನಿಸ್ ಕವನದಲ್ಲಿ ಒಂದು ಪದ್ಯವನ್ನೇ ಈತನಿಗೆ ಮೀಸಲಿಟ್ಟು ಶ್ರದ್ಧಾಂಜಲಿ ಅರ್ಪಿಸಿದ. ಕೀಟ್ಸ್ ತನ್ನ ಎಂಡಿಮಿಯನ್ ಕವನವನ್ನು ಈತನಿಗೆ ಅರ್ಪಿಸುವುದರ ಜೊತೆಗೆ ಈತನ ಕಾವ್ಯದಿಂದ ಬಹಳಷ್ಟು ಪ್ರಭಾವಿತನಾದ. ಫ್ರಾನ್ಸಿನಲ್ಲಿ ಚಾಟರಟನ್ನನನ್ನು ಕುರಿತ ಅತಿರೇಕದ ಆಪೆರಗಳೂ ರಚಿತವಾದವು.

	ರೌಲೆ ಎಂಬ ಅಂಕಿತವಿಟ್ಟುಕೊಂಡು ಬರೆದ ಕವನಗಳಲ್ಲದೆ ಈತ ತನ್ನ ಹೆಸರಿನಲ್ಲೇ ಕೆಲವು ತೀರ ಸಾಧಾರಣ ಮಟ್ಟದ ಕೃತಿಗಳನ್ನು ರಚಿಸಿದ್ದುಂಟು. ಅವುಗಳಲ್ಲಿ ಕ್ಯೂ ಗಾರ್ಡನ್ಸ್ ಎಂಬ ವಿಡಂಬನ ಕವನವೂ ಆಫ್ರಿಕನ್ ಎಕ್ಸೊಗ್ಸ್ ಎಂಬ ಅಂತ್ಯಪ್ರಾಸದ ದ್ವಿಪದಿಗಳೂ ಸೇರಿವೆ. ಆದರೆ ಅವುಗಳಲ್ಲಿ ಕಾವ್ಯದ ಕಾವು ಕಡಿಮೆ, ಅನುಕರಣೆಯ ಕೃತಕತೆಯೇ ಹೆಚ್ಚು. ಇವುಗಳಿಗಿಂತ ಮಿಗಿಲಾಗಿ ಈತನ ಪುರಾತನ ಶೈಲಿಯ ಕವನಗಳೇ ಹೆಚ್ಚಾಗಿ ಗಮನ ಸೆಳೆಯುತ್ತವೆ. ಅದರಲ್ಲೂ ಮುಖ್ಯವಾಗಿ ಏಯೆಲ ಗಾಡ್ವಿನ್ ಎಂಬ ನಾಟಕೀಯ ಕವನಗಳು, ಉಪನಾಟಕಗಳು, ದಿ ಬ್ಯಾಟಲ್ ಆಫ್ ಹೇಸ್ಟಿಂಗ್ಸ್ ಎಂಬ ಕಥನಕವನ, ಬ್ರಿಸ್ಟೊವ್ ಟ್ರ್ಯಾಜಡಿ, ಬ್ಯಾಲಡ್ ಆಫ್ ಚ್ಯಾರಿಟಿ ಎಂಬ ಬ್ಯಾಲಡ್ ಮಾದರಿಯ ನೀಳ್ಗವನಗಳೂ ಈತನ ಕಾವ್ಯಪ್ರತಿಭೆಗೆ ಸಾಕ್ಷಿಯಾಗಿವೆ. ಈತ ಪ್ರಾಚೀನ ಹಾಗೂ ಅಜ್ಞಾತ ಕೃತಿಗಳಿಂದ ಎತ್ತಿದ ಚಿತ್ರ ವಿಚಿತ್ರ ಶಬ್ದ ಪ್ರಯೋಗಗಳು, ಮಾತಿನ ತಿರುವು, ರೂಪಕಗಳ ಬಳಕೆ, ಅಚ್ಚರಿ ಹುಟ್ಟಿಸುವಂತಿವೆ. ಆದರೆ ಕಾವ್ಯದ ಮೂಲಭೂತ ಸರಣಿಗಿಂತ ಹೆಚ್ಚಾಗಿ ಬದುಕಿನ ರಮ್ಯಕಥೆಯಿಂದಲೇ ಚಾಟರ್‍ಟನ್‍ಗೆ ಅಪಾರಕೀರ್ತಿ ಒದಗಿತೆಂಬ ಮಾತು ಸುಳ್ಳಲ್ಲ. ಅದೇನೇ ಇರಲಿ. ಈತನೊಬ್ಬ ಅಪ್ರತಿಮ ಪ್ರತಿಭಾವಂತನೆಂಬುದರಲ್ಲಿ ಸಂದೇಹವಿಲ್ಲ. ಈತನ ಕಾವ್ಯದ ಮಹತ್ತ್ವವನ್ನು ಉತ್ಪ್ರೇಕ್ಷಿಸದೇ ಹೋದರೂ ಈತನ ಕಾಲದ ಇಂಗ್ಲಿಷ್ ಕಾವ್ಯದ ಮೇಲೆ ಈತ ಬೀರಿದ ವ್ಯಾಪಕ ಪರಿಣಾಮವನ್ನು ಉಪೇಕ್ಷಿಸುವಂತಿಲ್ಲ.										(ಎಚ್.ಕೆ.ಆರ್.)

ಇಂಗ್ಲಿಷ್ ಕಾವ್ಯದ ಛಂದಸ್ಸು, ಲಯಗಳ ಮೇಲೆ ಚಾಟರ್‍ಟನ್ ಪ್ರಭಾವವಿದೆ. ಉದಾಹರಣೆಗೆ, ಕೋಲೆಂಜ್‍ನ `ಕ್ರಿಸ್ಟಬೆಲ್ ಕಥನ ಕವನದ ಎಂಟು ಸಿಲಬಲ್‍ಗಳ ಛಂದಸ್ಸುಗಳ ಚಾರ್‍ಅನ್ ಬಳಸಿದ್ದ.				(ಎಲ್.ಎಸ್.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ